Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶುಕ್ರವಾರ, ಡಿಸೆಂಬರ್ 31, 2010

ಒಂಟಿ ಪಯಣಿಗ ನಾನಿಲ್ಲಿ.... ! " ಹೊಸ ವರುಷದ ಹಾರ್ದಿಕ ಶುಭಾಶಯಗಳು "



ಬೆತ್ತಲೆ ಮನಸಿನ ಕನಸಿನಲಿ

ಕತ್ತಲೆ-ಬೆಳಕಿನ ಆಟದಲಿ

ಸ್ವಾರ್ಥವು ತುಂಬಿದ ಬದುಕಿನಲಿ

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ಕೋಪ-ತಾಪದ ಮಳೆಯಲಿ 

ಜಾತಿ-ಧರ್ಮದ ಗಿಡ-ಮರಗಳ ನೆರಳಿನಲಿ

ಕಷ್ಟ-ಸುಖದ ಚಿಲಿ-ಪಿಲಿ ಇಂಚರದಲಿ 

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ಅಸೊಯೆಯು ತುಂಬಿದ ಕಲ್ಲು-ಮಣ್ಣಿನ ದಾರಿಯಲಿ

ಮೋಹದ ಪೊರೆಯಲಿ ಮುಚ್ಚಿದ ನೋಟದಲಿ

ದ್ವೇಷದಿ ಉರಿಯುತ್ತಿರುವ ಬಂಡೆಗಳ ನಡುವಲ್ಲಿ

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ಅರ್ಥವ ತಿಳಿಯದ ಆಸೆಯು ತುಂಬಿದ ಹೆಜ್ಜೆಗಳಲ್ಲಿ

ದಗೆ ಏರಿದ ಬಯಕೆಗಳ ಬಾಯಾರಿಕೆಯಲ್ಲಿ

ಅಂತ್ಯವ ಕಾಣದೆ ಉರುಳುತ್ತಿರುವ ಗಡಿಗಳಲ್ಲಿ

ಕುಂಟುತ್ತಾ ಸಾಗುವ ಹಾದಿಯಲಿ

ಒಂಟಿ ಪಯಣಿಗ ನಾನಿಲ್ಲಿ.... !



ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...
                                   


                                - ಹಳ್ಳಿ ಹುಡುಗ ತರುಣ್         
                                                 - tharunkumar84@gmail.com

ಶನಿವಾರ, ಡಿಸೆಂಬರ್ 11, 2010

ಹೋದೆಯಾ ನಲ್ಲೆ ಹೋದೆಯಾ ನೀ ದೂರಾ....



ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನಿನ್ನ ಕಂಡಾ ದಿನದಿಂದಾ ನನ್ನ ಮನದಲ್ಲಿ
ಬಳ್ಳಿಯಂತೆ ಚಿಗುರಿದ ಅಸೆ ಇದು..
ಮನದಲ್ಲಿ ನಿನ್ನದೇ ನೆನಪಿನ ಮೋಡ
ಬೆಳಸಿ ತುಂತುರು ಮಳೆಯಾದ ಪ್ರೀತಿ ಇದು...


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನೋವು-ನಲಿವಿಗೂ ನಿನ್ನ ತೊಳಿನಾಸರೆಯ 
ಬಯಸಿದ ಪ್ರೀತಿ ಇದು..
ಮನಸಿನ ಶೂನ್ಯತೆಗೆ ನಿನ್ನನ್ನೆ 
ನೆನೆದ ಪ್ರೀತಿ ಇದು....
ನಿನ್ನ ಸಂಬಂಧದ ಭಾವತೀವ್ರತೆಗೆ
ತವಕಿಸುತ್ತಿರುವ ಹೃದಯವಿದು..


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

ನನ್ನ ಮನಸಿನ ಅಲೆಯೊಡನೆ
ಅಲೆ-ಅಲೆಯಾಗಿ ಬರುತಿಹ 
ನಿನ್ನ ನೆನಪನ್ನು ನಾ ಹೇಗೆ ಮರೆಯಲಿ..
ಕೈಗೆ ಸಿಗದ ನನ್ನ ಕನಸಿನ ಕಡಲಲ್ಲಿ 
ತೇಲುತಿಹ ನಿನ್ನನು ನಾ ಹೇಗೆ ಬಿಡಲಿ...


ಹೋದೆಯಾ ನಲ್ಲೆ ಹೋದೆಯಾ ನೀ ದೂರ 
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!

                             - ಹಳ್ಳಿ ಹುಡುಗ ತರುಣ್
                             tharunkumar84@gmail.com

ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....

ಗುರುವಾರ, ನವೆಂಬರ್ 4, 2010

ದೀಪಾವಳಿಯ ಶುಭಾಶಯಗಳು



ಬೆಳಕೇ ನಿನ್ನೊಲುಮೆಯಿಂದ ಹೃದಯದೊಳು ಒಲುಮೆಯ ಗೀತೆ ತೇಲಿ ಬರುತ್ತಿರಲಿ, ಎದೆಯಿಂದ ಎದೆಗೆ.. ನಿನ್ನ ಪ್ರೀತಿಯ ಗಾಳಿ ಸೋಕಿ ದ್ವೇಷ ಸ್ವಾರ್ಥವ ಹೊರಗೆ ನೂಕಿ....
ದೀಪಾವಳಿಯ ಶುಭಾಶಯಗಳು.
                                                           

ಸೋಮವಾರ, ನವೆಂಬರ್ 1, 2010

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...!.



"ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ"


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...! 



ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಉತ್ತರದಲ್ಲಿ ಭೊರ್ಗರೆದು ಹರಿಯುತಿಹನು


ಕೃಷ್ಣನು, ಭೀಮ ಮಲಪ್ರಭ


ಘಟಪ್ರಭ ತುಂಗಭದ್ರೆಯ ಮಡುವಲ್ಲಿ, 


ಹೇಮಾವತಿ ಕಬಿನಿ ಕನ್ನಂಬಾಡಿ


ಒಡಲನ್ನು ತುಂಬಿ ತಣಿಸುತಿಹಳು


ದಕ್ಷಿಣದಲ್ಲಿ ಕನ್ನಡತಿಯ ಮಗಳು ಕಾವೇರಿ..!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ನಂದ, ಮಯೂರ, ಕದಂಬ,


ಚಾಲುಕ್ಯ, ಹೊಯ್ಸಳ, ಮೈಸೂರು 


ವಿಜಯನಗರದರಾಸರಾಳಿದ ಕಲೆಯ ಬೀಡು, 


ರನ್ನ ಪೊನ್ನ ಪಂಪರ ಸಾಹಿತ್ಯದ 


ನಾಡಿದು, ಕುವೆಂಪು ಬೇಂದ್ರೆ ಕಾರಂತ


ಮಾಸ್ತಿಯರು ಆರಳಿಸಿದ ಕರುನಾಡಿದು..




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಮಲೆನಾಡ, ಕರಾವಳಿ, 


ಬಯಲು ಸೀಮೆಯ ನಡುವಲ್ಲಿ 


ಬೆಳಗುತಿಹ ಸಹ್ಯಾದ್ರಿಯ ಒಡಲು  


ಕೋಟಿ ಜೀವಿಗಳ ಮಡಿಲು ಕರುನಾಡು..




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಡೊಳ್ಳು ಕುಣಿತ ಕಂಸಾಳೆ


ವೀರಗಾಸೆ  ಕೋಲಾಟ


ಸೋಮನ ಕುಣಿತ ಯಕ್ಷಗಾನ


ಹಗಲು ವೇಷದಂತ ಜಾನಪದ ಕಲೆಗಳ 


ಸಂಸ್ಕೃತಿಯ ತವರುನಾಡು ಕನ್ನಡ ನಾಡು...!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಗುಬ್ಬಿ ವೀರಣ್ಣ, ಕೈಲಾಸಂ 


ಕಾರಂತ,ಸುಬ್ಬಣ್ಣರ೦ತವರು


ಬೆಳೆಸಿದ ರಂಗಭೂಮಿಯ ನಾಡು


ಗಂಗೂಬಾಯಿ, ಭೀಮಸೇನ್ ಜೋಷಿ,


ಪುಟ್ಟರಾಜ್ ಗವಾಯಿರವರಂತ 


ಸಂಗೀತ ಮಾಂತ್ರೀಕರಿಂದ 


ತಣಿಸಿದ ಬೀಡು ಕರುನಾಡು..!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




                      - ಹಳ್ಳಿ ಹುಡುಗ ತರುಣ್
                         tharunkumar84@gmail.com




ಭಾನುವಾರ, ಅಕ್ಟೋಬರ್ 31, 2010

ನಾನೇನನ್ನು ಬರೆಯಲಿ ಇಂದು..!



ಕರಾಗುತ್ತಿರುವ ಕಲ್ಪನೆಗಳಲ್ಲಿ

ಬಾಡುತ್ತಿರುವ ಭಾವನೆಗಳಲ್ಲಿ

ನಂದಿಹೋಗಿರುವ ನಂಬಿಕೆಯಲ್ಲಿ

ನಾನೇನನ್ನು  ಬರೆಯಲಿ ಇಂದು...!


ಆಳುತ್ತಿರುವ ಬೆತ್ತಲೆಯ ನಾಯಕರ ನಡುವಲ್ಲಿ

ಕತ್ತಲಾಗುತ್ತಿರುವ ಸಹ್ಯಾದ್ರಿಯ ನಾಡಿನಲ್ಲಿ, 

ಜವಾಬ್ದಾರಿಯ ಅರಿಯದ ಪ್ರಜೆಗಳ ನಡುವೆ

ನಾನೇನನ್ನು ಬರೆಯಲಿ ಇಂದು...!


ಕುದಿಯುತ್ತಿರುವ ಮರ್ಮದಲ್ಲಿ

ಹೊಡೆದಾಡುವ ಕಾಮದಲ್ಲಿ

ಅಂಜಿಕೆಯಿಲ್ಲದ ಆನಂದದಲ್ಲಿ

ನಾನೇನನ್ನು ಬರೆಯಲಿ ಇಂದು...!

               - ಹಳ್ಳಿ ಹುಡುಗ ತರುಣ್
            tharunkumar84@gmail.com  



ಭಾನುವಾರ, ಅಕ್ಟೋಬರ್ 24, 2010

ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ ..............



ನಾನು ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

ಬರುವ ಸಂಬಳ ನನ್ನ ಜೊಬು
ತುಂಬಲ್ಲ, ನನ್ನ ಬಳಿಯು ಸಾಲದ 
ಕರೆಯೋಲೆಯ ಪತ್ರವಿಲ್ಲ
ಅದು ಅವಳಿಗೆ ಹಿಡಿಸೋಲ್ಲ ....೧

ಮಾಲು-ಗಿಲು ಸುತ್ತೋ ಚಟವು
ನನಗಿಲ್ಲ, ಕಾರು-ಬೈಕು 
ನನ್ನ ಬಳಿ ಮೊದಲೇ ಇಲ್ಲ
ಅದು ಅವಳಿಗೆ ಹಿಡಿಸೋಲ್ಲ ....೨

ಹಿಂದಿ-ಇಂಗ್ಲೀಶ್ ಮತಾಡೋಕ್ಕೆ 
ನನಗೆ ಬರಲ್ಲ, ಪೀಜಾ-ಬರ್ಗರ್ 
ನಾನು ತಿನ್ನಲ್ಲ
ಅದು ಅವಳಿಗೆ ಹಿಡಿಸೋಲ್ಲ....೩

ನಾ ಹಾಕೋ ಬಟ್ಟೆಗೆ ಬಣ್ಣ ಬಳೆದಿಲ್ಲ, 
ಅಂದವ ತಿಳಿಯದ ಕೃತಕ 
ಬದುಕಿನ ಪೇಟೆಯ ಹುಡುಗ ನಾನಲ್ಲ
ಅದು ಅವಳಿಗೆ ಹಿಡಿಸೋಲ್ಲ....೪

ನಾ ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

                                          - ಹಳ್ಳಿ ಹುಡುಗ ತರುಣ್
                                                          tharunkumar84@gmail.com  


ಶನಿವಾರ, ಅಕ್ಟೋಬರ್ 23, 2010

ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........




   ನಿನ್ನ ಕಣ್ಣಲ್ಲಿ ಕವಿದಿಹ ಪೊರೆಯ
ನಡುವಲ್ಲಿ ಮೂಡಿಹ ಅಹಂ,
   ದ್ವೇಷದ ಭಾವಾದಿ, ಕನಸಿನ ಮೊಹದಿ
    ವಿಷವ ಕಾರುತಿಹ ನಿನ್ನ ಮನಸಿನ ಆಸೆ
               ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ತಾ ಬೆಳೆದರೆ ಎಲ್ಲ,
 ತಾನುಳಿದರೆ ಚೆನ್ನ, ತನಗೆತನೆಲ್ಲಾ 
ತಾನಗಿನ್ಯಾರು ಎನ್ನುತಿಹ       
ನಿನ್ನ ಮನಸಿನ ದುರಹಂಕಾರ
           ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ........!

ಪರರಿಗಪಕಾರವ ಬಯಸಿ
ತನ್ನುಪಕರಕ್ಕೆಂದು ಸ್ವಾರ್ಥದ 
ಅಲೆಗಳಲ್ಲಿ ತೇಲಿ ಆನಂದಿಸುತ 
ನೀ ನುಡಿಯುತ್ತಿರುವ ಸತ್ಯ
              ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ಮದವೇರಿದ ಹುಮ್ಮಸಿನಲ್ಲಿ
ಅಧಿಕಾರದ ಗದ್ದುಗೆಯಲಿ
ಕಷ್ಠವೆಂದು ಬಂದವರ ಲೆಕ್ಕಿಸದೆ
ತನ್ನವರಿಗೆಂದು ಕೂಡಿಟ್ಟ ಹಣ
             ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ.........!


                                                                    - ಹಳ್ಳಿ ಹುಡುಗ ತರುಣ್
                                                          tharunkumar84@gmail.com  

    

ಶನಿವಾರ, ಅಕ್ಟೋಬರ್ 2, 2010

ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....




ನನ್ನ ಜೋಡಿ ನಿನ್ನ ಜೋಡಿ
ಅಪ್ಪ ನೀನು, ಮಗನು ನಾನು
ಕದ್ದು ತಿನ್ನೋದು ಅಂದ್ರೆ
ನಮ್ಮ ಜೋಡಿ ಮುಂದೆ ಎಲ್ಲ ಹಿಂದೆ
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಗಾಂಧಿ ತತ್ವದಲ್ಲೇ ಬದುಕುವೆನೆಂದು
ಹೇಳುವಂತ ಅಪ್ಪನ ಮಗನು ನಾನು
ಅಪ್ಪನಿಂದ, ಅಪ್ಪಗಾಗಿ, 
ಜೋಡಿ ಎತ್ತು ನಾವು ಹಾಗಿ, 
ಬಡವರ, ಅಧಿಕಾರ ಕೊಟ್ಟವರ 
ಭೂಮಿ ತಿಂದು ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು...
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನು  ರಾಘವೇಂದ್ರ, ಅಲ್ಲ ನಾನು
ವಿಜಯೇಂದ್ರ, ತಿಂದರೇನಂತೆ 
ನಮ್ಮ ಅಪ್ಪ ಹೇಳುತ್ತಾರೆ 
ನಮ್ಮ ತಪ್ಪು ಅವರದಲ್ಲದಂತೆ 
ನಮ್ಮ ಅಭಿವೃದ್ದಿಯೇ ಅವರ ಸಾಧನೆಯಂತೆ
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಾನೇ ಜಗದೀಶ ನಮ್ಮಪ್ಪನೆ ನನಗೀಶ
ಅವರು ಟೋಪಿ ತೊಟ್ಟು ಹಿಂದೆ 
ಬರುವುರೆಲ್ಲರಿಗೂ ಟೋಪಿ 
ಹಾಕಲು ನನ್ನ ಬಿಟ್ಟುರು...
ನೂರು ಕೋಟಿ ಮಾಡಿಬಿಟ್ಟೆ
ಕಟ್ಟಾ ಮುಖದಲಿ ಕೆಟ್ಟ 
ಕೊಳೆಯ ತೆಗೆದು ಬಿಟ್ಟೆ..
ಸಿಕ್ಕಿಬಿದ್ದೀವೆಂದು 
ತಿಳಿದರೆ ಮೂರ್ಖರಯ್ಯ ನೀವಿಂದು..
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ಮರೆಯದಿರಿ ಬಲು ಜೋಡಿಗಳಲ್ಲಿ 
ನಮ್ಮನು, ನಾನೇ ರಾಮಚಂದ್ರ 
ನನ್ನ ಮಗನೆ ಸಪ್ತಾಗಿರಿ 
ನಾವು ಹಾಕಿಕಟ್ಟಿದ ಕಟ್ಟೆಗೆ 
ನಾವೇ ಬಿದ್ದೇವೆಂದು ತಿಳಿದಿದ್ದರೆ
ಮೂರ್ಖರಯ್ಯ ನೀವಿಂದು....
ನಮ್ಮಗೆಲ್ಲ  ಅಭಿವೃದ್ದಿಯ ಮಾಡಲೆಂದು
ಕಣ್ಣೀರು ಇಟ್ಟು ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

ನಮ್ಮ ಜೋಡಿ ಸೇರುವರನ್ನ ಕಾದುನೊಡಿ 
ಅಂದು ತುಪ್ಪವಿಟ್ಟ ಅಪ್ಪನನ್ನೆ 
ಏನು ಮಾಡಲಾಗಲಿಲ್ಲ, ಇನ್ನು
ನಮ್ಮ ಜೋಡಿಯನ್ನು ಯಾರು
ಬೇರೆ ಮಾಡಿಯಾರು.....
ನಮ್ಮ ಜೋಡಿ ಕಾಪಾಡುತಿಹರು 
ನಮ್ಮಪ್ಪ ಯಡ್ಡೀ ಸಿದ್ದಾಲಿಂಗಪ್ಪ....

                           - ಹಳ್ಳಿ ಹುಡುಗ ತರುಣ್
                       tharunkumar84@gmail.com  

ಮನಸು...


ಎದುರು ಅಲೆ ಎಬ್ಬಿಸುವ 
ಕಡಲ ದಡದಲ್ಲಿ
ಮುಳುಗುತ್ತಿಹ ರವಿಯ 
ಕೆಂಪನೆಯ ಮುಖದಲ್ಲಿ
ಕರಗುತಿಹುದೆನ್ನ ಮನಸು....! 

ತಂಪಾದ ಗಾಳಿಯಲ್ಲಿ
ಹಸಿರ ಉಟ್ಟಿ, ತಳಿರು 
ತೋರಣದಿ ತೂಗುತ್ತಿಹ
ಮರ-ಗಿಡಗಳ ಬಳ್ಳಿಯಲ್ಲಿ
ನಲಿಯುತಿಹುದೆನ್ನ ಮನಸು..!

ಗದ್ದೆಯ ಬದಿಯ ತಳದಲ್ಲಿ
ಹರಿಯುತ್ತಿಹ ನೀರಿನ
ಝುಳು ಝುಳು ನಾದಕ್ಕೆ
ತಲೆಯನ್ನಾಡಿಸುತಿಹ ಪೈರಿನಲಿ
ತೂಗಾಡುತಿಹುದೆನ್ನ ಮನಸು...!

ರೆಕ್ಕೆಯ ಬಡಿತದ ರಬಸದಲ್ಲಿ
ಒಂದಾಗಿ ತನ್ನ ಬಳಗದಲ್ಲಿ
ನೀಲಾಕಾಸದಲ್ಲಿ ತೇಲುತಿಹ
ಚಿಲಿ-ಪಿಲಿ ಹಕ್ಕಿಯ ಜೊತೆಯಲ್ಲಿ
ತೇಲಿ ಹೊಗುತಿಹುದೆನ್ನ ಮನಸು...!

ದಟ್ಟಾರಣ್ಯಾದ ನಡುವಿನಲ್ಲಿ
ನಡೆಯುತಿಹ ಕಾಡು ಮೃಗದ
ಒಡಲಲ್ಲಿ ಮೂಡುತ್ತಿಹ 
ಬೇಟೆಯ ಹಂಬಲದಲ್ಲಿ 
ಸಿಲುಕಿ ನಲಿಯುತಿಹುದೆನ್ನ ಮನಸು...!

ಬೆಳದಿಂಗಳ ರಾತ್ರಿಯಲಿ
ಬೆಳಗುತಿಹ ಚಂದಿರನ ಮರೆಯಲ್ಲಿ
ಇಣುಕುತಿಹ ನಕ್ಷತ್ರಗಳ ಸಾಲಿನಲ್ಲಿ
ಬರೆದಿಹ ರಂಗೊಲಿಯ ಮಧ್ಯದಲ್ಲಿ
ಮೆರೆಯುತ್ತಿಹುದೆನ್ನ ಮನಸು...!

ಘಮ ಘಮಿಸುತ್ತಿಹ ಹೂದೊಟದಲ್ಲಿ
ಮಧುವನ್ನು ಹಿರುತ್ತಿಹ
ದುಂಬಿಯ ನಾದದಲ್ಲಿ
ಕರಗುತಿಹ ಮೌನದಲ್ಲಿ
ಮುಳುಗುತಿಹುದೆನ್ನ ಮನಸು....!
                        
- ಹಳ್ಳಿ ಹುಡುಗ ತರುಣ್
   tharunkumar84@gmail.com  

ಕೆಲಸದ ಒತ್ತಡದಿಂದ ಬಹಳ ದಿನದಿಂದ ಎನನ್ನು ಬರೆಯಲಾಗಲಿಲ್ಲ so, ಅದಕ್ಕೆ ಇಂದು, ರಾತ್ರಿಯಲ್ಲಿ ಹಾಗೆ ನನ್ನ ಮನಸನ್ನು ತೇಲಿ ಬಿಟ್ಟೆ, ಅದರ ಪ್ರಯಾಣವೆ ಈ ಮನಸು..................... ಅದಿ ತಪ್ಪಿದ್ದರೆ ಕ್ಷೇಮಿಸಿ ಮತ್ತು ತಿಳಿಸಿ :)

ತಪ್ಪಿದ್ದರೆ ದಯವಿಟ್ಟು ತಿಳಿಸಿ....


ಭಾನುವಾರ, ಸೆಪ್ಟೆಂಬರ್ 19, 2010

ಓ ಹೆಣ್ಣೇ!



ಅಂತರಾತ್ಮದಲ್ಲಿ ಅರಳಿ ಬರುವ ಗುಲಾಬಿಯೂ ನೀನಾದೆ
ಮನದೊಡಲಲ್ಲಿ ಉಕ್ಕಿಬರುವ ಜ್ವಾಲಾಮುಖಿಯೂ ನೀನಾದೆ
ಕಾಮನ ಬಿಲ್ಲಲಿ ಮೂಡಿಬರುವ ಬಣ್ಣವೂ ನೀನಾದೆ
ಪ್ರಕೃತಿಯ ಸೌಂದರ್ಯಕ್ಕೆ ರಾಣಿಯೂ ನೀನಾದೆ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!

ವರ್ಣಿಸುವ ಕವಿಯ ಕವಿತೆಗೆ ಕಲ್ಪನೆಯಾಗುವವಳೇ
ಶಿಲ್ಪಿಯ ಕೈಯಲ್ಲಿ ಆರಳುವ ಶಿಲೆಗೆ ಜೀವವಾಗುವವಳೇ
ಪ್ರಕೃತಿಯ ಜೀವಕ್ಕೆ ಮೊದಲ ಮಾತಾದವಳೇ
ಕಲಿಯುವ ಜೀವಕ್ಕೆ ಕಲಿಸುವ ಜ್ಞಾನಿಯಾಗುವವಳೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!

ಉಳಿವು ನೀನೇ ಅಳಿವು ನೀನೇ
ಮೊಹವು ನೀನೇ ಮೊಹಿನಿಯು ನೀನೇ
ಕದಿಯಲಾಗದ ಕನಸು ನೀನೇ ನನಸು ನೀನೇ
ಆನಂದವು ನೀನೇ ಅಸೊಯೆಯು ನೀನೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!

ನನ್ನೀ ಜೀವದ ಉಸಿರಿಗೆ ಜಿವದಾತೆಯಾಗಿ
ನನ್ನೊಲವಿನ ಪ್ರೀತಿಗೆ ಪ್ರೇಯಸಿಯಾಗಿ
ನನ್ನಾ ಮೋಹದ ಸಾಕ್ಷಿಗೆ ಮಗಳಾಗಿ
ಸಂಬಂದದ ಸಿಹಿಗೆ ಅಕ್ಕ-ತಂಗಿಯಾಗಿ
ನನಗೆ ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
           
                - ಹಳ್ಳಿ ಹುಡುಗ ತರುಣ್
tharunkumar84@gmail.com

ಓ ಹೆಣ್ಣೇ, ಬಹಳ ದಿನಗಳ ಹಿಂದೆ ಬರೆದಿದ್ದೆ, ಆದರೆ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿರಲಿಲ್ಲ,ಇಂದು ಪ್ರಕಟಿಸುವ ಮನಸಿನಿಂದ ಪ್ರಕಟಿಸುತಿದ್ದೇನೆ, ಈ ಕವಿತೆಯನ್ನು ಕೇಳಿರುವ-ಕಂಡಿರುವ ಸ್ನೇಹಿತರು ವಿನಹ ತಿಳಿಯಬಾರದೆಂದು ಕೇಳಿಕೊಳ್ಳುತೆನೇ...  

ಗುರುವಾರ, ಸೆಪ್ಟೆಂಬರ್ 9, 2010

ಜಾಲಿ ಮೂಡಿನಲ್ಲಿ ಬಾಲೆ ಬಂದಳು ..



ಅಂದ ಚಂದದಂತ ಉಡುಗೆ ತೊಟ್ಟು
ಅಸೆಯನ್ನು ಕಣ್ಣಲಿಟ್ಟು, 
ಅಂಕು ಡೊಂಕು ಹೆಜ್ಜೆಯಾಕುತ್ತ
ಮೋಹದಂತ ನಗುವ ಬೀರಿ
ಜಾಲಿ ಮೂಡಿನಲ್ಲಿ ಬಾಲೆ ಬಂದಳು ...

ಬಸ್ಸಿನಲ್ಲಿ ಕುತಾ ಎಳೆಯ ಹೃದಯ
ಒಮ್ಮೆ ಝಲ್ ಎಂದಿತು, ಹಲ್ಲ ಕಿರಿಯುತಾ..

ಅಕ್ಕ-ಪಕ್ಕ ನೋಡಲಿಲ್ಲ,
ತನ್ನ ಮೇಲೆ ಜ್ಞಾನವಿಲ್ಲ, 
ಅಂಗೊಪಾಂಗಗಳ ತೊರಿಸುತ್ತ
ನಿಧ ನಿಧಾನವಗಿ
ಜಾಲಿ ಮೂಡಿನಲ್ಲಿ ಬಾಲೆ ಬಂದಳು ...

ಬಸ್ಸಿನಲ್ಲಿ ಕುತಾ ಎಳೆಯ ಹೃದಯ
ವಿಧ ವಿಧಾನವಗಿ ಖುಷಿಯಲಿ ಕುಣಿಯಿತು..

ಪಟ-ಪಟ ಮಾತನಾಡುತ್ತ, ಕಟ್ಟಕಡೆಯ 
ತುಟಿತುದಿಯ ತುಂಟ ನಗೆಯ ಬೀರುತಾ
ಗಡಿ ಮೀರಿ ಬಸ್ಸು ಹೊರಡೊ ಮೊದಲೆ
ಜಾಲಿ ಮೂಡಿನಲ್ಲಿ ಬಾಲೆ ಹೊರಟುಹೊದಳು.

ಬಸ್ಸಿನಲ್ಲಿ ಕುತಾ ಎಳೆಯ ಹೃದಯ
ಇಂಗು ತಿಂದ ಮಂಗನಂತೆ ಪೆಚ್ಚಾಯಿತು....
                              
                          - ಹಳ್ಳಿ ಹುಡುಗ ತರುಣ್
                                       tharunkumar84@gmail.com

ಭಾನುವಾರ, ಸೆಪ್ಟೆಂಬರ್ 5, 2010

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

                  
                      
                 "ಗುರು" ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು, ಎಂದರೆ ಇದನ್ನು ಕೇಳಿದ ತಕ್ಷಣವೇ ನಮ್ಮ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುಭಕ್ತಿಯನ್ನು ನಾವು ಕಂಡಿದ್ದೆವೆ. 
                 ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂರುವ ನಮ್ಮಂತಹ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ನಮ್ಮ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುತ್ತಿರುವರು ನಮ್ಮಗೆ ವಿಧ್ಯಾ ಕಲಿಸಿದ ಗುರುಗಳಗೆ, ಹಸಿ ಮಣ್ಣಿನಂತೆ ಇದ್ದ ನಮ್ಮ ಮನಸ್ಸನ್ನು ತನ್ನೆರಡು ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹದಂತೆ ನಮ್ಮೆಲ್ಲರ ಜೀವನ ರೂಪಿಸಿದ ನಮ್ಮ ಗುರುಗಳಿಗೆ, ಸಮಸ್ತಾ ಗುರು ಕುಲಕ್ಕೆ, ಶಿರಬಾಗಿ ನಮಿಸೋಣ ಕ್ಷಣ ಕ್ಷಣವು ನೆನೆಯೋಣ ಕಣ್ಣುಗಳ ತೆರೆಸಿದ ಗುರುಗಳಿಗೆ ಶಿಕ್ಷಕರ ದಿನ ಶುಭಾಸಯಗಳು. 


  ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಚಿನ್ಮಯಂ ವ್ಯಾಪಿ ಯತ್ಸರ್ವಂ ತ್ರೈಲೋಕ್ಯಂ ಸಚರಾಚರಮ್
ತತ್ಪಾದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅನೇಕಜನ್ಮಸಂಪ್ರಾಪ್ತ ಕರ್ಮಬಂಧ ವಿದಾಹಿನೇ
ಅತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ
ಮದಾತ್ಮ ಸರ್ವ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್
ದ್ವಂದ್ವಾತೀತಂ ಗಗನಸದ್ರುಶಂ ತತ್ವಮಸ್ಯಾದಿಲಕ್ಶ್ಯಮ್
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷೀಭೂತಮ್
ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಮ್
ನಿತ್ಯಬೋಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಮ್ ||
                                                                                             (ಮೂಲ: ನನಗೆ ದೊರೆತಿದ್ದು ಕುವೆಂಪುರವರ ಬೆರಳ್ ಗೆ ಕೊರಳ್ ನಲ್ಲಿ)