ಬೆತ್ತಲೆ ಮನಸಿನ ಕನಸಿನಲಿ
ಕತ್ತಲೆ-ಬೆಳಕಿನ ಆಟದಲಿ
ಸ್ವಾರ್ಥವು ತುಂಬಿದ ಬದುಕಿನಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ಕೋಪ-ತಾಪದ ಮಳೆಯಲಿ
ಜಾತಿ-ಧರ್ಮದ ಗಿಡ-ಮರಗಳ ನೆರಳಿನಲಿ
ಕಷ್ಟ-ಸುಖದ ಚಿಲಿ-ಪಿಲಿ ಇಂಚರದಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ಅಸೊಯೆಯು ತುಂಬಿದ ಕಲ್ಲು-ಮಣ್ಣಿನ ದಾರಿಯಲಿ
ಮೋಹದ ಪೊರೆಯಲಿ ಮುಚ್ಚಿದ ನೋಟದಲಿ
ದ್ವೇಷದಿ ಉರಿಯುತ್ತಿರುವ ಬಂಡೆಗಳ ನಡುವಲ್ಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ಅರ್ಥವ ತಿಳಿಯದ ಆಸೆಯು ತುಂಬಿದ ಹೆಜ್ಜೆಗಳಲ್ಲಿ
ದಗೆ ಏರಿದ ಬಯಕೆಗಳ ಬಾಯಾರಿಕೆಯಲ್ಲಿ
ಅಂತ್ಯವ ಕಾಣದೆ ಉರುಳುತ್ತಿರುವ ಗಡಿಗಳಲ್ಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...
- ಹಳ್ಳಿ ಹುಡುಗ ತರುಣ್
- tharunkumar84@gmail.com